ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಪುಸ್ತಕಗಳು
Share
ರವಿಶಂಕರ ವಳಕ್ಕುಂಜರ ಎರಡು ಅಮೂಲ್ಯ ಪುಸ್ತಕಗಳ ಲೋಕಾರ್ಪಣೆ

ಲೇಖಕರು :
ಕಟೀಲು ಸಿತ್ಲ ರಂಗನಾಥ ರಾವ್
ಗುರುವಾರ, ಡಿಸೆ೦ಬರ್ 18 , 2014

ಶ್ರೀಯುತ ರವಿಶಂಕರ ವಳಕ್ಕುಂಜರ ಎರಡು ಅಮೂಲ್ಯ ಪುಸ್ತಕಗಳು, “ಯಕ್ಷಗಾನ ಪ್ರಸಂಗ ದೃಶ್ಯಾವಳೀ” ಮತ್ತು “ಯಕ್ಷಗಾನ ವಾಚಿಕ ಸಮಾರಾಧನೆ” ದಿನಾಂಕ 13ನೇ ದಶಂಬರ 2014 ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಯಕ್ಷಲೋಕಾರ್ಪಣೆಗೊಂಡಿತು. ನಿಜಕ್ಕೂ ಬಹಳ ಅಚ್ಚುಕಟ್ಟಾದ ಸಭಾ ಕಾರ್ಯಕ್ರಮ. 6.30 ಕ್ಕೆ ಸರಿಯಾಗಿ ಯಕ್ಷಗಾನದ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಾಗವತರಾಗಿ ಪ್ರಪುಲ್ಲಚಂದ್ರ ನೆಲ್ಯಾಡಿಯವರು, ಮದ್ದಳೆಯಲ್ಲಿ ಗಿರೀಶ್ ಕಾವೂರು ಹಾಗೂ ಚೆಂಡೆಯಲ್ಲಿ ರಾಜೇಶ್ ಆಚಾರ್ಯ ಮಡ್ಯಂತಾರ್ ಇವರುಗಳು ಸಹಕರಿಸಿದರು.

ಲೇಖಕ ರವಿಶ೦ಕರ್ ವಳಕ್ಕು೦ಜರವರಿ೦ದ ಸ್ವಾಗತ ಭಾಷಣ
( ಚಿತ್ರ ಕೃಪೆ : ಈಶ್ವರ ಶರ್ಮ )
ಎರಡೂ ಪುಸ್ತಕಗಳ ಲೇಖಕರಾದ ಶ್ರೀಯುತ ರವಿಶಂಕರ ವಳಕ್ಕುಂಜರವರು ಬಹಳ ಅತ್ಯುತ್ತಮವಾದ ಸ್ವಾಗತ ಭಾಷಣವನ್ನು ಮಾಡಿದರು. ನಿಜವಾಗಿಯೂ ಘನಕಾರ್ಯವನ್ನು ಈ ಎರಡು ಪುಸ್ತಕಗಳನ್ನು ರಚಿಸುವುದರ ಮೂಲಕ ಮಾಡಿರುವ ಲೇಖಕರು ತನ್ನ ಸ್ನೇಹಿತರು, ಹಿತೈಷಿಗಳ ಸಹಕಾರದಿಂದ ಅತೀ ಸಣ್ಣ ಕಾರ್ಯವನ್ನು ಮಾಡಿದ್ದೇನೆ ಎನ್ನುತ್ತಾರೆ. ಮಾತ್ರವಲ್ಲದೇ ಈ ಮಾತುಗಳಿಂದಾಗಿ ಲೇಖಕರು ಬಹಳ ಆಪ್ತರಾಗುತ್ತಾರೆ.

ವೇದಿಕೆಯನ್ನು ಅಲಂಕರಿಸಿದವರು:

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀಯುತ ಪಳ್ಳತಡ್ಕ ಪರಮೇಶ್ವರ ಭಟ್ಟರು ವಹಿಸಿಕೊಂಡರು (ಕೊನೆಯ ಕ್ಷಣದ ಬದಲಾವಣೆ). ಕೃತಿ ಬಿಡುಗಡೆ ಶ್ರೀಯುತ ವಾಸುದೇವ ಆಸ್ರಣ್ಣರು ಹಾಗೂ ಅನಂತ ಪದ್ಮನಾಭ ಆಸ್ರಣ್ಣರು. ಶ್ರೀಯುತ ಕಮಲಾದೇವಿಪ್ರಸಾದ ಆಸ್ರಣ್ಣರು, ಶ್ರೀಯುತ ಹರಿನಾರಾಯಣ ಆಸ್ರಣ್ಣರು, ಮುಖ್ಯ ಅತಿಥಿಯಾಗಿ ಕಟೀಲು ಆರೂ ಮೇಳಗಳ ಸಂಚಾಲಕ ಶ್ರೀಯುತ ದೇವೀಪ್ರಸಾದ ಶೆಟ್ಟಿ ಹಾಗೂ ಶ್ರೀಯುತ ಸುಣ್ಣಂಬಳ ವಿಶ್ವೇಶ್ವರ ಭಟ್ಟರು. “ಯಕ್ಷಗಾನ ಪ್ರಸಂಗ ದೃಶ್ಯಾವಳೀ” ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಶ್ರೀಯುತ ಪ್ರಭಾಕರ ಜೋಶಿ ಹಾಗೂ “ಯಕ್ಷಗಾನ ವಾಚಿಕ ಸಮಾರಾಧನೆ” ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಶ್ರೀಯುತ ಸೂರಿಕುಮೇರಿ ಗೋವಿಂದ ಭಟ್ಟರು. ಜತೆಯಲ್ಲಿ ಶ್ರೀಯುತ ಹಿರಣ್ಯ ವೆಂಖಟೇಶ್ವರ ಭಟ್ಟರು.

ಮೂವರು ಯಕ್ಷಗಾನದ ಕಲಾವಿದರುಗಳ ಅನಿಸಿಕೆಯನ್ನು ಈ ಕೆಳಗೆ ಕೊಡಮಾಡಿದ್ದೇನೆ. ವೀಡಿಯೋದಲ್ಲಿಯೂ ಇದನ್ನು ನೋಡಬಹುದು. ಅದರ ಪಾಠವನ್ನು ಈ ಕೆಳಗೆ ಕೊಡಮಾಡಿದ್ದೇನೆ. ಡಾ|| ಪ್ರಭಾಕರ ಜೋಶಿಯವರು ಮತ್ತು ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಅನಿಸಿಕೆಗಳು ಬಹಳಷ್ಟು ವಸ್ಥಿನಿಷ್ಠತೆಯನ್ನು ಒಳಗೊಂಡಿದೆ.

“ಯಕ್ಷಗಾನ ಪ್ರಸಂಗ ದೃಶ್ಯಾವಳೀ” ಪುಸ್ತಕದ ಬಗೆಗಿನ ಡಾ|| ಪ್ರಭಾಕರ ಜೋಶಿಯವರ ಅಭಿಪ್ರಾಯಗಳು:

ಕಳೆದ 50 ವರ್ಷಗಳಿಂದ ಈಚೆಗೆ ಯಕ್ಷಗಾನವನ್ನೇ ಆಧರಿಸಿ ಅನೇಕ ಗ್ರಂಥಗಳು ಬಂದಿವೆ. ಎಲ್ಲಾ ರೀತಿಯ ಯಕ್ಷಗಾನಕ್ಕೆ ಸಂಬಂಧಿಸಿ ಒಟ್ಟು ಸುಮಾರು 500 ಗ್ರಂಥಗಳಿವೆ ಎನ್ನುತ್ತಾರೆ. ಮೊಟ್ಟಮೊದಲ ಗ್ರಂಥ ರಚನೆಯಾಗಿದ್ದು 1930 ನೇ ಇಸವಿಯಲ್ಲಿ. ಡಾ|| ಶಿವರಾಮ ಕಾರಂತರು ಯಕ್ಷಗಾನ ಪ್ರದರ್ಶನದ ವಿಮರ್ಶೆಯನ್ನು ಆರಂಭಿಸಿದವರು.

ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ವಸ್ಥುನಿಷ್ಠವಾಗಿ ಬಹಳ ಅಚ್ಚುಕಟ್ಟಾಗಿ ವಿಶ್ಲೇಷಣೆಯನ್ನು ಮಾಡಿದರು. ಕಲಾವಿದರುಗಳು ಪುಸ್ತಕಗಳನ್ನು ಓದುವುದಿಲ್ಲ. ಅದರ ಬದಲಾಗಿ ಯಾವೆಲ್ಲಾ ರೀತಿ ಪುಸ್ತಕಗಳನ್ನು ಉಪಯೋಗಿಸುತ್ತಾರೆ ಎನ್ನುವುದನ್ನು ಬಹಳ ಅಚ್ಚುಕಟ್ಟಾಗಿ ಉದಾಹರಣೆಯ ಮೂಲಕ ತಿಳಿಸಿದರು. ಮುಂದುವರೆದು ಈಗ ಈ ಎರಡೂ ಪುಸ್ತಕಗಳ ರಚನೆಯಾದ ಬಳಿಕ ಇದೀಗ ಬಹಳಷ್ಟು ಜನರಿಗೆ ಅನ್ನಿಸಿದೆ ಇದನ್ನು ತಾವೂ ಮಾಡಬಹುದಿತ್ತು ಎಂಬುದಾಗಿ, ಇದು ಒಂದು ಒಳ್ಳೆಯ ಪುಸ್ತಕದ ಲಕ್ಷಣ ಎಂಬುದಾಗಿ ಅಭಿಪ್ರಾಯ ಪಟ್ಟರು. ತೀರಾ ವಿದ್ವತ್ಪೂರ್ಣವಾದ ಪುಸ್ತಕಗಳು ಅಷ್ಟೊಂದು ಪ್ರಯೋಜನಕ್ಕೆ ಬರಲಾರದು ಆದರೆ ಈ ರೀತಿಯ ನೇರ ರಂಗಕ್ಕೆ ಸಂಬಂಧಿಸಿದ ಪುಸ್ತಕಗಳು ಬಹಳ ಆವಶ್ಯಕ ಎಂದರು.

ವಳಕ್ಕು೦ಜರವ ಪುಸ್ತಕಗಳ ಲೋಕಾರ್ಪಣೆಯ ಸಮಾರ೦ಭ
ಬೇರೆ ಹಲವು ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಉಪಯೋಗಿಸದೇ ಇದ್ದರೂ ಈ ಪುಸ್ತಕಗಳನ್ನು ಖಂಡಿತವಾಗಿಯೂ ಕಲಾವಿದರುಗಳು ಉಪಯೋಗಿಸಿಕೊಂಡಾರು, ಇನ್ನು ಹಲವು ಚೌಕಿಗಳಲ್ಲಿ ಈ ಪುಸ್ತಕದ ಕೆಲವು ಪ್ರಸಂಗದ ದೃಶ್ಯ ಪಟ್ಟಿಯ ಜೆರಾಕ್ಸ್ ಪ್ರತಿಗಳನ್ನು ಮುಂದಕ್ಕೆ ಕಾಣಬಹುದು ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದರು.

ಬಹಳ ಮುಖ್ಯವಾದ ವಿಚಾರವೊಂದನ್ನು ಡಾ|| ಪ್ರಭಾಕರ ಜೋಶಿಯವರು ತಿಳಿಯಪಡಿಸಿದರು. ಅದೆಂದರೆ ಒಂದು ಇಡಿಯ ಪ್ರಸಂಗವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವಾರು ದೃಶ್ಯಗಳನ್ನು ಬಿಟ್ಟು ಪ್ರದರ್ಶಿಸುವಾಗ ಬಿಟ್ಟ ದೃಶ್ಯಗಳ ವಿವರಗಳು ಈ ಪುಸ್ತಕದಿಂದ ಲಭ್ಯವಾಗುತ್ತದೆ. ಮಾತ್ರವಲ್ಲದೇ ಯಾವುದೇ ಭಾಗದಿಂದ ಪ್ರದರ್ಶನ ಪ್ರಾರಂಭಿಸಬಹುದು. ಇದನ್ನು ಬೇರೆ ರೀತಿಯಿಂದ ಮುಂದುವರೆಸಬಹುದು ಅಥವಾ ಇನ್ನೂ ಉತ್ತಮಗೊಳಿಸಬಹುದು. ಮುಂದೆ ಯಾರಾದರೂ ಅಥವಾ ಶ್ರೀಯುತ ರವಿಶಂಕರ ವಳಕ್ಕುಂಜರೇ ಈ ಪುಸ್ತಕವನ್ನೇ ಆಕರವನ್ನಾಗಿಸಿಕೊಂಡು ಬೇರೆ ಬೇರೆ ಸಾಧ್ಯತೆಗಳನ್ನು ಸಾಧಿಸಬಹುದು ಎಂದರು.

ಇದು ಯಕ್ಷಗಾನದಲ್ಲಿ ಹೊಸದಾದ ಒಂದು ಕವಲು. ಇನ್ನು ಉಳಿದವರು ಕೂಡ ಹೊಸ ರೀತಿಯ ಇಂತಹ ಪ್ರಯತ್ನಗಳಿಗೆ ಮುಂದಾಗಲಿ ಎಂದು ಆಶಿಸಿದರು.

“ಯಕ್ಷಗಾನ ವಾಚಿಕ ಸಮಾರಾಧನೆ” ಪುಸ್ತಕದ ಬಗೆಗಿನ ಸೂರಿಕುಮೇರಿ ಗೋವಿಂದ ಭಟ್ಟರ ಅಭಿಪ್ರಾಯಗಳು:

ವಾಚಿಕದ ಬಗ್ಗೆ ಈಗಾಗಲೇ ಪುಸ್ತಕಗಳು ಬಂದಿವೆ. ಯಕ್ಷಗಾನದಲ್ಲಿ ವಾಚಿಕಾಭಿನಯ ಎಂಬುದು ಸ್ವತಂತ್ರವಾಗಿ, ಸಮಯೋಚಿತವಾಗಿ ಕಲಾವಿದ ಪಾತ್ರವಾಗಿ ಮಾತನ್ನಾಡುತ್ತಾನೆ. ಅದಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ಸಾಮಗರು, ದೇರಾಜೆ ಸೀತಾರಾಮಯ್ಯನವರು, ಕುಂಬ್ಳೆ ಸುಂದರ ರಾಯರು ಒಂದೊಂದು ಪ್ರಸಂಗಕ್ಕೆ ಅರ್ಥ ವಿವರಣೆಯನ್ನು ಬರೆದಿದ್ದನ್ನು ನಾವು ನೋಡಬಹುದು. ರವಿಶಂಕರ ವಳಕ್ಕುಂಜರು ಪ್ರಸಂಗದ ಬೇರೆ ಬೇರೆ ಪಾತ್ರಗಳ ಅರ್ಥಗಾರಿಕೆಯ ವಿವರಣೆಯನ್ನು ಬರೆದಿದ್ದಾರೆ. ಪುಂಡುವೇಷಗಳು, ಸ್ತ್ರೀವೇಷಗಳು ಹೀಗೆ ಬೇರೆ ಬೇರೆ ಜಾತಿಯ ಪಾತ್ರಗಳ ವಾಚಿಕವನ್ನು ಸರಳವಾದ ಭಾಷೆಯನ್ನು ಬಳಸಿ ಬರೆದಿದ್ದಾರೆ. ಅಭ್ಯಾಸಿಗಳಿಗೆ ಇದು ಕೈಪಿಡಿಯಾಗಬಹುದು. ಪುರಾಣಗಲಿಂದ ತೊಡಗಿ ಪ್ರಚಲಿತ ರಾಜಕೀಯದವರೆಗೆ ಯಕ್ಷಗಾನದ ವಾಚಿಕದಲ್ಲಿ ಎಲ್ಲವನ್ನೂ ತುರುಕಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಬೀದಿ ಬದಿಯ ಅಂಗಡಿಗಳ ಬಗ್ಗೆಯೂ ಹೇಳಬಹುದು, ಯಜ್ನಮಂಟಪದ ಬಗ್ಗೆಯೂ ಹೇಳಬಹುದು. ಇದು ಯಕ್ಷಗಾನದಲ್ಲಿ ತನ್ನ ಅನುಭವನ್ನು ಹಂಚಿಕೊಳ್ಳುವುದಕ್ಕೆ ಕಲಾವಿದ ಪಾತ್ರಧಾರಿ ಸಿದ್ಧನಾಗುತ್ತಾನೆ.

ಈ ಪುಸ್ತಕದಲ್ಲಿ ಬಹಳ ಸರಳವಾಗಿ, ಸುಂದರವಾಗಿ ವಾಚಿಕವನ್ನು ಬರೆಯಲಾಗಿದೆ. ಇದನ್ನೇ ಉರುಹೊಡೆದು ಹೇಳಬೇಕೆಂದಲ್ಲ. ಅಭ್ಯಾಸಿಗಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಇದನ್ನು ಬರೆಯಲಾಗಿದೆ. ಯಕ್ಷಗಾನ ಕಲಾವಿದರು ಇದರ ಉಪಯೋಗ ಪಡೆಯುವುದಕ್ಕಿಂತಲೂ ಪ್ರೇಕ್ಷಕರು ಇದರ ಉಪಯೋಗವನ್ನು ಹೆಚ್ಚು ಪಡೆಯಬಹುದು. ದಿನ ದಿನವೂ ಹೊಸ ಹೊಸ ವಿಮರ್ಶಕರು ಹುಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಇದನ್ನು ಓದಿ ತಿಳಿದು ಕಲಾವಿದನನ್ನು ವಿಮರ್ಶಿಸುವುದಕ್ಕೆ ಅನುಕೂಲವಾಗುತ್ತದೆ. ಈ ಪುಸ್ತಕ ಯಕ್ಷಗಾನ ಕಲಾವಿದರಿಗಲ್ಲ, ಪ್ರೇಕ್ಷಕರಿಗೆ. ಒಂದು ವೇಳೆ ಯಕ್ಷಗಾನ ಕಲಾವಿದರು ಈ ಪುಸ್ತಕವನ್ನು ತೆಗೆದುಕೊಂಡರೆ ಮರುದಿನ ಪೇಟೆಯ ಅಂಗಡಿಯಲ್ಲಿ ಬಜೆ ಕಟ್ಟುವುದಕ್ಕೆ ಇದನ್ನು ಉಪಯೋಗಿಸುವುದನ್ನು ಕಾಣಬಹುದೋ ಏನೋ. ಪಾತ್ರದ ಔಚಿತ್ಯ, ಭಾಷೆ ಹೇಗೆ ಸರಳವಾಗಿ, ಸುಂದರವಾಗಿರಬೇಕು, ಒಂದು ಪಾತ್ರದ ಅರ್ಥಗಾರಿಕೆಯೆಂದರೆ ಹೇಗಿರಬೇಕು ಇತ್ಯಾದಿಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕಲಾವಿದ ತನ್ನನ್ನು ರೂಪಿಸಿಕೊಳ್ಳುವುದಕ್ಕೆ ಹಾಗೂ ಪದ್ಯದ ಅರ್ಥ ಹೇಳುವುದು ಹೇಗೆ ಎಂಬುದರ ಕಲ್ಪನೆ ಕಲಾವಿದನಿಗೆ ಮೂಡಬಹುದು.

ಯಕ್ಷಗಾನದಲ್ಲಿ ವಾಚಿಕ ಸ್ವತಂತ್ರವಾಗಿ ಇರುವಂಥದ್ದು, ಆದುದರಿಂದ ಅಭ್ಯಾಸಿಗಳಿಗೆ ಮಾತ್ರ ಇದು ಉಪಯೋಗವಾದೀತು. ವಳಕ್ಕುಂಜರ ಈ ಪ್ರಯತ್ನ ಶ್ಲಾಘನೀಯ. ಇದನ್ನು ನೋಡಿದ ಮೇಲೆ ನನಗೂ ಅನ್ನಿಸಿತು ನನಗೂ ಒಂದು ಪುಸ್ತಕ ಬರೆಯಬಹುದಾಗಿತ್ತು ಎಂದು. ಇಂತಹ ಪುಸ್ತಕಗಳನ್ನು ಬರೆಯಲು ಸಮರ್ಥರಾದ, ತಿಳುವಳಿಕೆಯುಳ್ಳ ಅನೇಕ ಕಲಾವಿದರುಗಳು ನಮ್ಮೊಂದಿಗಿದ್ದಾರೆ, ಅವರಿಗಾದರೂ ಇದೊಂದು ಆದರ್ಶವಾಗಲಿ ಎಂದು ಬಯಸುತ್ತೇನೆ. ಆಸಕ್ತಿಯುಳ್ಳ ಕಲಾವಿದರುಗಳಿಗೆ ಇದು ಅನುಕೂಲವಾಗಲಿ ಎಂದು ಬಯಸುತ್ತೇನೆ. ಕಲಾವಿದರು ಇದನ್ನು ಓದುತ್ತಾರೆಂಬ ವಿಶ್ವಾಸವಿಲ್ಲ. ಆದರೆ ಆಸಕ್ತಿಯಿಂದ ಓದಿದರೆ ಏನಾದರೂ ಒಳ್ಳೆಯದಾದೀತು ಎಂದು ಆಶಿಸುತ್ತೇನೆ. ಇಂತಹ ಪ್ರಯತ್ನಗಳು ಇನ್ನಷ್ಟು ರವಿಶಂಕರರಿಂದ ಆಗಲಿ. ಕಲಾವಿದರುಗಳು, ಪ್ರೇಕ್ಷಕರು ಇದರ ಲಾಭವನ್ನು ಪಡೆಯಲಿ ಎಂದು ಆಶಿಸುತ್ತೇನೆ ಎಂದರು.

“ಯಕ್ಷಗಾನ ಪ್ರಸಂಗ ದೃಶ್ಯಾವಳೀ” ಮತ್ತು “ಯಕ್ಷಗಾನ ವಾಚಿಕ ಸಮಾರಾಧನೆ” ಎರಡೂ ಪುಸ್ತಕಗಳ ಬಗ್ಗೆ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಅನಿಸಿಕೆಗಳು:

ಒಬ್ಬ ಕಲಾವಿದ ಮೇಳದಲ್ಲಿ ತಿರುಗಾಟ ಮಾಡುವುದು ಕೇವಲ ಸಂಪಾದನೆಯ ದೃಷ್ಟಿಯಿಂದ ಎಂದು ತಿಳಿಯುವ ಕಾಲ ಬಂದಿದೆ. ನಿಜವಾಗಿ ಅಲ್ಲ, ಮೇಳ ಅನ್ನುವುದು ಒಂದು ವಿದ್ಯಾಲಯ ಇದ್ದ ಹಾಗೆ. ಕಲಾವಿದ ಸಮಾಜಕ್ಕೂ ಒಂದು ಸಂಸ್ಕಾರವನ್ನೂ ವಿದ್ಯೆಯನ್ನೂ ಉಪದೇಶಿಸುವ ಮಟ್ಟಕ್ಕೆ ಬೆಳೆಯಬೇಕು ಹಾಗೆ ಬೆಳೆಯಬೇಕು ಅಂತಾದರೆ ಮೊದಲು ತಾನು ಬೆಳೆಯಬೇಕು. ಇದಕ್ಕೆ ಯಾವುದು ಪಾಠಶಾಲೆ ಕೇಳಿದ್ರೆ ಮೇಳವೇ ಪಾಠಶಾಲೆ. ಬೇರೆ ಬೇರೆ ಪ್ರಸಂಗಗಳಾಗುತ್ತವೆ, ಬೇರೆ ಬೇರೆ ಸನ್ನಿವೇಶಗಳು ಆ ಪ್ರಸಂಗಗಳಲ್ಲಿ ಹಾದು ಹೋಗುತ್ತವೆ ಇದೆಲ್ಲವನ್ನೂ ಒಂದು ಗುರುಕುಲ ಪದ್ಧತಿಯಲ್ಲಿ ಅಭ್ಯಾಸ ಮಾಡುವಂತೆ ಇರುವುದು ಯಕ್ಷಗಾನ ಕಲೆಯಲ್ಲಿ.

ರವಿಶಂಕರ್ ವಳಕ್ಕುಂಜ,ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಹಿರಣ್ಯ ವೆಂಕಟೇಶ್ವರ ಭಟ್
( ಚಿತ್ರ ಕೃಪೆ : ಈಶ್ವರ ಶರ್ಮ )
ವಳಕ್ಕುಂಜರು ಇಷ್ಟು ವರ್ಷದ ಮೇಳದ ತಿರುಗಾಟದಲ್ಲಿ ಏನು ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ನಿದರ್ಶನವೆಂಬಂತೆ ಈ ಎರಡು ಪುಸ್ತಕಗಳು. ಒಂದು ತಾವು ನಿತ್ಯ ಅನುಭವಿಸಿದ ಕಿರಿಕಿರಿಯ ಕೊರತೆಯಿಂದ ಸಿದ್ಧವಾದದ್ದು ವಾಚಿಕ ಸಮಾರಾಧನಾ. ಮೇಳದಲ್ಲಿ ಈಗಿರುವ ಸ್ಥಿತಿಯನ್ನು ಕಂಡು ಕಂಡು ಸಿದ್ಧವಾದದ್ದು ಎನ್ನುವುದು ನನ್ನ ಎಣಿಕೆ. ಯಾಕೆಂದರೆ ಶುದ್ಧ ಉಚ್ಛಾರ ಇಲ್ಲ, ಪದ್ಯಕ್ಕೆ ಹೇಳಬೇಕಾದ ಅರ್ಥ ಹೇಳುವುದಿಲ್ಲ, ಹೇಳಬೇಕಾದಷ್ಟಕ್ಕೆ ನಿಲ್ಲಿಸುವುದಿಲ್ಲ. ಹೀಗೆಲ್ಲಾ ಇರುವುದರಿಂದ ಲಂಬಿಸಬಾರದೇ ಇರಬೇಕಾದ ಸನ್ನಿವೇಶಗಳು ಲಂಬಿಸುತ್ತವೆ, ಬೇಕಾದದ್ದಕ್ಕೆ ಸಮಯ ಇಲ್ಲ, ಈ ಅವ್ಯವಸ್ಥೆಗಳೆಲ್ಲವೂ ಬರುತ್ತವೆ.

ಪೂರ್ತಿ ನಿದ್ದೆ ಬಿಟ್ಟು ರಾತ್ರಿ ಇಡೀ ಆಟ ನೋಡುವ ಪ್ರೇಕ್ಷಕರೇ ಇಲ್ಲ. ಸ್ವಲ್ಪ ಸ್ವಲ್ಪ ನೋಡುವವನಿಗೆ ಈ ಕೊರತೆಗಳು ಗಮನಕ್ಕೆ ಬರುವುದಿಲ್ಲ. ಒಂದು ಪ್ರದರ್ಶನವನ್ನು ಪೂರ್ಣ ಪ್ರಮಾಣದಲ್ಲಿ ನೋಡಿ, ಅರಿತು ಆಲೋಚಿಸಿ ವಿಮರ್ಶಿಸುವ ಗುಣ ಮೊತ್ತಮೊದಲಾಗಿ ಬರಬೇಕಾದ್ದು ಕಲಾವಿದರಿಗೆ ಆಮೇಲೆ ಪ್ರೇಕ್ಷಕರಿಗೆ. ಕಲಾವಿದನಿಗೆ ಇದು ಬಾರದೇ ಇದ್ದರೆ ಆ ಕಲೆಯಲ್ಲಿ ಏನನ್ನೂ ಸಾಧಿಸುವುದಕ್ಕೆ ಆಗುವುದಿಲ್ಲ. ಕೇವಲ ತಾನು ವಹಿಸಿದ ಪಾತ್ರವನ್ನು ಕಾಣಿಸುವ ಒಂದೇ ಉದ್ದೇಶ ಇದ್ದರೆ ಸಾಕಾಗುವುದಿಲ್ಲ. ಇಡೀ ಕಥೆಯಲ್ಲಿ ಕಾಣಬೇಕಾದ ಪಾತ್ರ ಯಾವುದು, ಆ ಪಾತ್ರದ ಮುಖ್ಯವಾದ ಆಶಯ ಯಾವುದು ಆ ಕಥೆಯಲ್ಲಿ ರೂಪಿಸಲ್ಪಡಬೇಕಾದ ನೀತಿ ಏನು ಇಷ್ಟನ್ನು ಕಲಾವಿದ ತರ್ಕಿಸದೇ ಇದ್ದರೆ ಅವನೊಬ್ಬ ಕಲಾವಿದನಾಗಿ ಕಲೆಗೆ ಯಾವ ನ್ಯಾಯವನ್ನೂ ದೊರಕಿಸಿಕೊಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು ನನ್ನ ಎಣಿಕೆ. ಇದು ಆಳವಾಗಿ ನೋಡುವ, ಸತತ ಅಧ್ಯಯನ ಮಾಡುವವನಿಗೆ ಮಾತ್ರ ಸಾಧ್ಯವಾಗುತ್ತದೆ. ಖಂಡಿತ ಅಧ್ಯಯನದ ಕೊರತೆ ಇದೆ ಯಕ್ಷಗಾನದಲ್ಲಿ .

ಪ್ರಥಮವಾಗಿ ಕಲಾವಿದನಾಗಿ ಮೇಳ ಸೇರುವ ಹೊತ್ತಿನಲ್ಲಿ ಇತರರಿಗಿಂತ ಭಿನ್ನವಾಗಿ ಇರಲಿಲ್ಲ ರವಿಶಂಕರ ವಳಕ್ಕುಂಜರು. ಇತರರಲ್ಲಿ ಕೇಳಿ, ತಿಳಿದು, ಆ ಪಾತ್ರದ ಕ್ರಮ ಹೇಗೆ, ಎಷ್ಟು ಹೊತ್ತಿಗೆ ವೇಷ ಹೊರಡಬೇಕು ಇತ್ಯಾದಿ. ಯಾಕೆಂದರೆ ಅವರು ಮೇಳ ಸೇರುವ ಹೊತ್ತಿನಲ್ಲಿ ನಾನು ಮೇಳದಲ್ಲಿದ್ದೆ. ನನ್ನ ಜತೆಗೆ ಇದ್ದವರು ಅವರು. ಆದರೆ ಕೇಳಿ ತಿಳಿದದ್ದನ್ನು ಒಂದನ್ನೂ ಅವರು ಮರೆತಿಲ್ಲ. ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಎಷ್ಟು ನೆನಪಿಟ್ಟುಕೊಂಡಿದ್ದಾರೆ ಎಂದರೆ ಅದನ್ನೇ ಒಂದು ದಾಖಲೆಯಾಗಿ ಮುದ್ರಿಸಿ ಕೊಡುವಷ್ಟು ನೆನಪಿಟ್ಟುಕೊಂಡಿದ್ದಾರೆ. ತಾನೂ ಬೆಳೆದಿದ್ದಾರೆ, ಕಲೆಯನ್ನೂ ಬೆಳೆಸಿದ್ದಾರೆ.

ವಾಚಿಕ ಸಮಾರಾಧನೆ ಎಂದರೆ ಅವರು ಒಂದು ಪಾತ್ರದ ಮಿತಿಯನ್ನಲ್ಲ ಹೇಳಿರುವುದು, ಯಾರೂ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಅನಿವಾರ್ಯತೆಯ ಮಾತನ್ನು ಹೇಳಿದ್ದಾರೆ. ಇಷ್ಟಾದರೂ ಹೇಳಲೇಬೇಕಾದಷ್ಟು ಅರ್ಥವನ್ನು ಇಲ್ಲಿ ಕೊಡಮಾಡಿದ್ದಾರೆ. ಕೇವಲ ಅಭ್ಯಾಸಿಗಳಿಗೆ ಮಾತ್ರವಲ್ಲ, ಬಹಳ ಕಲಿತವನಿಗೂ ಕೆಲವೊಮ್ಮೆ ಬೇಕಾಗುತ್ತದೆ ಇದು. ಯಾಕೆಂದರೆ ಮಿತಿಮೀರಿ ತಾಬು ಆಡುವುದನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇಷ್ಟರಲ್ಲಿಯೇ ಹೇಳಬೇಕಾದ್ದನ್ನು ಹೇಳಲು ಬರುತ್ತದೆ ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ.

ಮುಮ್ಮೇಳಕ್ಕೆ ಮಾತ್ರ ಅಲ್ಲ. ಹೆಮ್ಮೇಳದವರಿಗೂ ಉಪಯುಕ್ತವಾದ ಮತ್ತೊಂದು ಪುಸ್ತಕವನ್ನು ಅವರು ಬರೆದಿದ್ದಾರೆ ಪ್ರಸಂಗ ದೃಶ್ಯಾವಳೀ ಎಂಬುದಾಗಿ. ಭಾಗವತನಾಗಿ ರಂಗ ನಿರ್ದೇಶನ ಮಾಡುವಲ್ಲಿ ಇದು ಸಹಕಾರಿಯಾಗುತ್ತದೆ. ಮದ್ದಳೆಗಾರರಿಗೂ ಇದೊಂದು ಕೈಪಿಡಿ. ಮೇಳದಲ್ಲಿ ಯಾವ ವೇಷ ಆದ ಮೇಲೆ ಯಾವುದು? ಯಾವ ಯಾವ ದೃಶ್ಯಗಳು ಇವೆಲ್ಲವನ್ನೂ ಹಿಮ್ಮೇಳದವರು ತಿಳಿದಿರಬೇಕಾಗುತ್ತದೆ. ನಾವು ಇವುಗಳನ್ನು ನಿರೀಕ್ಷಿಸಬಹುದು ಅಷ್ಟೆ ಅದು ನಿಯಮ ಆಗಿ ಉಳಿದಿಲ್ಲ. ಅದು ನಿಯಮವಾಗಿ ಉಳಿಯಬೇಕೆನ್ನುವ ಉದ್ದೇಶದಿಂದ ರವಿಶಂಕರರು ಅದನ್ನು ದಾಖಲಿಸಿದ್ದಾರೆ.

ಹಾಗಾಗಿ ಎರಡೂ ಪ್ರಯೋಜನಪೂರ್ಣವಾದ ಪುಸ್ತಕಗಳು. ಕಲಿತವರಿಗೂ ಅನುಕೂಲ ಇದೆ, ಕಲಿಯದೇ ಇದ್ದವರಿಗೆ ಕಲಿಯಲು ಅನುಕೂಲವಾಗುತ್ತದೆ. ಕೇಳಿ ತಿಳಿಯುವ ಅಭ್ಯಾಸವಿಲ್ಲದವರು ನೋಡಿಯಾದರೂ ಕಲಿಯಲಿ ಈ ಸದಾಶಯ ಇದೆ ಅದರ ಹಿನ್ನೆಲೆಯಲ್ಲಿ ಎಂದು ನನಗೆ ಕಾಣುತ್ತದೆ. ಮತ್ತೆ ಬಹುಷಃ ರವಿಶಂಕರರಿಗೂ ಸಾಕಾಗಿರಬೇಕು ಬರೆದು ಕೊಟ್ಟೂ ಕೊಟ್ಟೂ. ಸಣ್ಣ ಉದಯೋನ್ಮುಖ ಕಲಾವಿದರಿಗೆ. ಹೀಗೆ ಸಣ್ಣ ಸಣ್ಣದಾಗಿ ಕೊಟ್ಟ ಬರವಣಿಗಳು ನಾಳೆಗೆ ಇಲ್ಲವಾಗಿ ಹೋಗುವ ಬದಲು ಒಂದು ಹೊತ್ತಗೆಯಾಗಿ ಉಳಿಯಲಿ, ಅವರ ಶ್ರಮವಾದರೂ ಸಾರ್ಥಕ್ಯವನ್ನು ಕಾಣಲಿ ಎನ್ನುವ ಉದ್ದೇಶದಿಂದ ಈ ಹೊತ್ತಗೆಯನ್ನು ಸಿದ್ಧಪಡಿಸಿದ್ದಾರೆ.

ಇದೊಂದು ಆದರ್ಶವಾಗಲಿ. ಎಲ್ಲ ಕಲಾವಿದರು ಇದರ ಪೂರ್ಣ ಪ್ರಮಾಣದ ಪ್ರಯೋಜನವನ್ನು ಹೊಂದಿದರೆ ಅವರ ಶ್ರಮಕ್ಕೊಂದು ಬೆಲೆ ಸಿಕ್ಕೀತು, ಅಲ್ಲದಿದ್ದರೆ ಅದಕ್ಕೆ ಮೌಲ್ಯ ಕಟ್ಟಲಿಕ್ಕೇ ಇಲ್ಲ ಯಾರೂ, ಅಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ ಸತತವಾಗಿ. ಇನ್ನು ಮುಂದಕ್ಕೆ ಇದಕ್ಕಿಂತಲೂ ಅತಿಶಯವಾದ, ಯಕ್ಷಗಾನ ಸಂಬಂಧವಾದ, ಸಾಹಿತ್ಯ ಸಂಬಂಧವಾದ ಪುಸ್ತಕಗಳನ್ನು ಕೊಡುವಂತಹ ಅವಕಾಶಗಳು ಶ್ರೀ ದೇವರು ಅನುಗ್ರಹಿಸಲಿ.

ಇದರ ಬಳಿಕ ಅಥಿತಿ ಅಭ್ಯಾಗತರು ಹಾಗೂ ಅಧ್ಯಕ್ಷರುಗಳಿಗೆ ಅಭಿನಂದನೆಗಳನ್ನೂ ಮತ್ತು ಸರ್ವರಿಗೂ ಧನ್ಯವಾದಗಳನ್ನೂ ಲೇಖಕರ ವತಿಯಿಂದ ಸಮರ್ಪಿಸಲಾಯಿತು.

ಯಕ್ಷಗಾನ ಆಸಕ್ತರ, ಕಲಾಭಿಮಾನಿಗಳ ಪ್ರೋತ್ಸಾಹ ಕೇವಲ ರವಿಶಂಕರ ವಳಕ್ಕುಂಜರಿಗೆ ಮಾತ್ರವಲ್ಲದೇ ಇಂತಹ ವಿಶಿಷ್ಠ ಕಾರ್ಯಗಳನ್ನು ಮಾಡುವ ಎಲ್ಲಾ ಕಲಾವಿದರುಗಳಿಗೆ, ಪೋಷಕರಿಗೆ ಲಭ್ಯವಾಗಲಿ ಎಂಬುದಾಗಿ ಆಶಿಸುತ್ತೇನೆ.

ಪುಸ್ತಕದ ಪ್ರತಿಗಳಿಗೆ ಸ೦ಪರ್ಕಿಸಲು ರವಿಶ೦ಕರ ವಳಕ್ಕು೦ಜರ ಮೊಬೈಲ್ 9164487083, 9972771284

**********************

ಈ ಕಾರ್ಯಕ್ರಮದ ವೀಡಿಯೋ ಲಿಂಕು





ಕೃಪೆ : http://rangasyaksharanga.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
shivashankara A.R.(1/1/2015)
good article .Valakkunja Ravishankara Bhat is a very good artist .I have seen him in some thalamaddale programmes, and also as hasya kalavida in yakshagana programmes




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ